ರುತೀನಿಯಮ್
ಆವರ್ತಕೋಷ್ಟಕದ ಪ್ಲಾಟಿನಮ್ ಗುಂಪಿನ 5ನೆಯ ಆವರ್ತದ ಸಂಕ್ರಮಣ ಧಾತು ವರ್ಗಕ್ಕೆ ಸೇರಿದ  ಲೋಹ.  ಪ್ರತೀಕ Ru  ? ಬೆಳ್ಳಿಬಿಳುಪಿನ ಗಡಸು ಲೋಹ. ಪರಮಾಣು ಸಂಖ್ಯೆ 44. ಪರಮಾಣು ತೂಕ 101.07. ದ್ರವನಬಿಂದು 22470 ಸೆ. ಕುದಿಬಿಂದು 39270 ಸೆ. ಸಾಪೇಕ್ಷ ಸಾಂದ್ರತೆ 12.43. ಎಲೆಕ್ಟ್ರಾನ್ ವಿನ್ಯಾಸ 1s2 2s2 2p6 3s2 3p6 3d10 4s2 4p6 4d7  5s1. ಉತ್ಕರ್ಷಣ ಸ್ಥಿತಿಗಳು +3, +4, +8. ಹನ್ನೊಂದು ಸಮಸ್ಥಾನಿಗಳ ಪೈಕಿ 7 ಸ್ಥಿರ.

ರುತೀನಿಯಮ್ ಪ್ಲಾಟಿನಮ್ ಲೋಹ ಖನಿಜಗಳಲ್ಲಿ ಲಭ್ಯ. ರಷ್ಯನ್ ರಸಾಯನವಿಜ್ಞಾನಿ ಕಾರ್ಲ್ ಕಾರ್ಲೊವಿಚ್ ಕ್ಲೌಸ್ ಇದನ್ನು ಶುದ್ಧ ರೂಪದಲ್ಲಿ ಮೊದಲು ಪ್ರತ್ಯೇಕಿಸಿದ(1844). ಗಡಸುತನ, ರಾಸಾಯನಿಕ ಸ್ಥಿರತೆ, ಸುಲಭವಾಗಿ ದ್ರವಿಸದಿರುವಿಕೆ ಮತ್ತು ಕೆಲವು ರಾಸಾಯನಿಕ ಕ್ರಿಯೆಗಳ ವೇಗವರ್ಧಿಸುವ ಸಾಮಥ್ರ್ಯ ಇದರ ಅಮೂಲ್ಯ ಗುಣಗಳು. ಸಂಕೀರ್ಣ ಸಂಯುಕ್ತಗಳನ್ನು ರೂಪಿಸಬಲ್ಲದು. ಇದು ಪ್ಲಾಟಿನಮಿಗಿಂತ ಉತ್ತಮ ರಾಜೋದಕ ರೋಧಿ.

ಪ್ಲಾಟಿನಮ್ ಮತ್ತು ಪೆಲೇಡಿಯಮ್ ಮಿಶ್ರಲೋಹಗಳನ್ನು ಗಡಸುಗೊಳಿಸಲು ರುತೀನಿಯಮ್ ಉಪಯುಕ್ತ. ವಿದ್ಯುತ್-ಸ್ಪರ್ಶ ಮಿಶ್ರಲೋಹಗಳು, ದಂತವೈದ್ಯವಿಜ್ಞಾನದಲ್ಲಿ ಹಲ್ಲುಗಳನ್ನು ಪೂರ್ವಸ್ಥಿತಿಗೆ ತರಲು ಬಳಸುವ ಪಿಂಗಾಣಿ-ಲೋಹಗಳು, ಆಭರಣಗಳು, ಅಕಾಂತೀಯ ತಿರುಗಾಣಿಗಳು (ಪಿವಟ್) ಮುಂತಾದವುಗಳ ತಯಾರಿಯಲ್ಲಿ ಈ ಮಿಶ್ರಲೋಹಗಳ ವ್ಯಾಪಕ ಬಳಕೆ ಇದೆ. -2630 ಸೆಲ್ಸಿಯಸ್‍ಗಿಂತ ಕಡಿಮೆ ತಾಪದಲ್ಲಿ ರುತೀನಿಯಮ್-ಮಾಲಿಬ್ಡಿನಮ್ ಮಿಶ್ರಲೋಹ ಅಧಿವಾಹಕ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ